ಕಲ್ಲಿದ್ದಲಿಗೂ (ಕೋಲ್) ಸಸ್ಯಾಂಗಾರಕ್ಕೂ (ಪೀಟ್) ಮಧ್ಯವರ್ತಿಯೆನಿಸುವ ಒಂದು ಬಗೆಯ ಕಂದು ಕಲ್ಲದ್ದಲು. ಇದನ್ನು ಗಾಳಿಗೆ ಒಡ್ಡಿದಂತೆಲ್ಲ ಇದರ ಬಣ್ಣ ಗಾಢವಾಗುತ್ತದೆ. ಇದಕ್ಕೆ ಉತ್ತಮ ಬಗೆಯ ದಾರುರಚನೆ ಇದೆ. ಹೆಚ್ಚು ಕಷ್ಟವಿಲ್ಲದೆ ಇದರಲ್ಲಿ ಸಸ್ಯವರ್ಗದ ಎಳೆಎಳೆಯ ನಾರುರಚನೆಯನ್ನು ಗುರುತಿಸಬಹುದು. ನಾರುಗಳು ಮುದ್ದೆ ಮತ್ತು ಮೆತು ಸಸ್ಯ ಸಂಬಂಧೀ ಪದಾರ್ಥವೊಂದರಲ್ಲಿ ಹುದುಗಿರುತ್ತವೆ. ಅನೇಕ ವೇಳೆ ಗೋಂದಿನ ಕಣಗಳೂ ಇರುವುದುಂಟು. ಲಿಗ್ನೈಟ್‍ನಲ್ಲಿ ಪದರು ರಚನೆಯನ್ನೂ ಕಾಣಬಹುದು. ಇದರಲ್ಲಿ ಸಾಮಾನ್ಯವಾಗಿ 25-45%ರಷ್ಟು ತೇವಾಂಶವಿರುವುದರಿಂದ, ಇದನ್ನು ವಾಯುವಿಗೆ ಒಡ್ಡಿದಾಗ ಒಣಗಿ, ಗಾತ್ರದಲ್ಲಿ ಕುಗ್ಗಿ ಛಿದ್ರಛಿದ್ರವಾಗುತ್ತದೆ. ಈ ಕಾರಣಕ್ಕಾಗಿ ಇದನ್ನು ದೂರದ ಪ್ರದೇಶಗಳಿಗೆ ರವಾನಿಸುವುದು ಲಾಭದಾಯಕವಲ್ಲ. ಇದು ವಾಯುಮಂಡಲದಲ್ಲಿರುವ ಆಕ್ಸಿಜನ್ನನ್ನು ಹೀರಿಕೊಂಡು ತನ್ನಷ್ಟಕ್ಕೆ ತಾನೇ ಹೊತ್ತಿಉರಿಯವುದೂ ಉಂಟು. ಹೀಗಾಗಿ ಅನೇಕ ಬೆಂಕಿ ಅನಾಹುತಗಳೂ ಉಂಟಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಇದನ್ನು ಬಯಲುಗಳಲ್ಲಿ ಶೇಖರಿಸುವುದಿಲ್ಲ. 

ಹೊಗೆಯಿಂದ ಕೂಡಿದ ಉದ್ದನೆಯ ಜ್ವಾಲೆಯನ್ನು ಸೂಸುತ್ತ ಲಿಗ್ನೈಟ್ ಉರಿಯುತ್ತದೆ. ಇದರ ಉಷ್ಣೋತ್ಪನ್ನ ಶಕ್ತಿಯೂ ಕಡಿಮೆ. ದಹನಶಕ್ತಿ ಒಂದು ಪೌಂಡಿಗೆ 6000-7500 ಬಿಟಿಯು. 	ಭಾರತದ ರಾಜಸ್ಥಾನ, ಅಸ್ಸಾಮ್, ಪಂಜಾಬ್, ಕೇರಳ, ತಮಿಳುನಾಡು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ದೊರೆಯುವ, ಕ್ರಿಟೇಷಸ್ ಕಲ್ಪದ, ಸಸ್ಯಾಂಗಾರ ಮತ್ತು ಲಿಗ್ನೈಟ್‍ಗಳು ಕಂದುಕಲ್ಲಿದ್ದಲ ವರ್ಗಕ್ಕೆ ಸೇರುತ್ತವೆ. ರಾಜಸ್ಥಾನದ ಬಿಕನೇರ್ ಸಮೀಪದ ಕುಲಾನ ಕಂದುಕಲ್ಲಿದ್ದಲಿನ ಗಣಿ ಮುಖ್ಯ ನಿಕ್ಷೇಪ ಎಂದು ಪರಿಗಣಿತವಾಗಿದೆ. ಮಧ್ಯ ಪ್ರದೇಶದ ಕರುಣ್ ನದಿಯ ಮರಳ ದಂಡೆಯಲ್ಲಿ ಮತ್ತು ಅದರ ಸುತ್ತುಮುತ್ತಲ ಪ್ರದೇಶಗಳಲ್ಲಿಯ ಕಂದುಕಲ್ಲಿದ್ದಲ ನಿಕ್ಷೇಪಗಳಲ್ಲಿ ಸುಮಾರು 15 ಸೆಂಮೀ ವ್ಯಾಸವುಳ್ಳ ಮರದ ದಿಮ್ಮಿಗಳನ್ನು ಗುರುತಿಸಲಾಗಿದೆ. ಕೇರಳದ ತೀರಪ್ರದೇಶದ ಹಲವಾರು ಕಡೆಗಳಲ್ಲಿ ಲಿಗ್ನೈಟ್ ದೊರೆಯುತ್ತದೆ. ತಮಿಳುನಾಡು ರಾಜ್ಯದ ಆರ್ಕಾಟ್ ಜಿಲ್ಲೆಯ ನೈವೇಲಿಯಲ್ಲಿ ಸಂಪದ್ಯುಕ್ತವಾದ ಲಿಗ್ನೈಟ್ ನಿಕ್ಷೇಪವಿದೆ. ಸೋವಿಯತ್ ದೇಶದ ತಾಂತ್ರಿಕ ನೆರವಿನೊಡನೆ  ಅಲ್ಲಿ ಲಿಗ್ನೈಟ್‍ನ್ನು ಉತ್ಖನಿಸಲಾಗುತ್ತಿದೆ. ಇದು ಉರುವಲಾಗಿ ಬಳಕೆಯಾಗುತ್ತದೆ.
	
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ